Chief Editor
Manohar. R (Manu)
Photo Journalist
chitrataramanu@gmail.com
+91 9845549026
ರುಪಾಯಿ ಕಲಿಸಿದ ಜೀವನ ಪಾಠ
Posted date: 12 Sun, Feb 2023 09:31:17 AM
ಹಣ ಎನ್ನುವುದು ಮನುಷ್ಯನ ಜೀವನದಲ್ಲಿ ಏನೆಲ್ಲ ಆಟವಾಡಿಸುತ್ತದೆ,   ಎಂಬುದನ್ನು ಐದು ಜನರ ದೃಷ್ಟಾಂತದೊಂದಿಗೆ ನಿರ್ದೇಶಕ ವಿಜಯ್ ಜಗದಾಲ್ ಅವರು ರೂಪಾಯಿ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶನದೊಂದಿಗೆ  ಚಿತ್ರದ ನಾಯಕನಾಗೂ ಕಾಣಿಸಿಕೊಂಡಿದ್ದಾರೆ.  ಮದ್ಯಮವರ್ಗದಿಂದ ಬಂದ ಐದು ಪಾತ್ರಗಳ  ಜೀವನದಲ್ಲಿ  ಹಣ ಎನ್ನುವುದು  ಹೇಗೆಲ್ಲ ಆಟವಾಡಿತು  ಎಂಬ ಕಥೆಯನ್ನು ಹೇಳಿದ್ದಾರೆ. ಹಾಗಂತ ಬರೀ ಹಣದ ಬಗ್ಗೆ ಮಾಡಿದ ಚಿತ್ರ ಇದಲ್ಲ, ಬದುಕಿನ ಮೌಲ್ಯಗಳು, ಪ್ರೀತಿ, ಪ್ರೇಮ, ಕಾಮಿಡಿ, ಭರ್ಜರಿ ಆ್ಯಕ್ಷನ್ ಜೊತೆಗೆ ಎಂಟರ್‌ಟೈನಿಂಗ್  ಆಗಿ ಚಿತ್ರವನ್ನು ನಿರೂಪಿಸಿರುವ  ನಿರ್ದೇಶಕರ ಶೈಲಿ  ನೋಡುಗರಿಗೆ ಇಷ್ಟವಾಗುತ್ತದೆ. ವಿಜಯ್ ಜೊತೆಗೆ ಯಶ್ವಿಕ್, ರಾಮ್ ಚಂದನ್, ಕೃಷಿ ತಾಪಂಡ ಹಾಗೂ ಚಂದನ ರಾಘವೇಂದ್ರ ಆ ಐದು ಪಾತ್ರಗಳನ್ನು ಪ್ರತಿನಿಧಿಸಿದ್ದಾರೆ. 
 
ಇತ್ತೀಚಿನ ದಿನಗಳಲ್ಲಿ  ಬಂದಿರುವ  ಚಿತ್ರಗಳಲ್ಲೇ  ಒಂದು ವಿಭಿನ್ನ ಕಂಟೆಂಟ್  ಇಟ್ಟುಕೊಂಡು  ವಿಜಯ್ ಜಗದಾಲ್ ಅವರು ರೂಪಾಯಿ ಚಿತ್ರವನ್ನು ತೆರೆಮೇಲೆ  ತಂದಿದ್ದಾರೆ. ಒಬ್ಬ ಸೆಕ್ಸ್ ವರ್ಕರ್ ಪಾತ್ರದಲ್ಲಿ  ಚಂದನ ರಾಘವೇಂದ್ರ ಉತ್ತಮ ಅಭಿನಯ ನೀಡಿದ್ದಾರೆ. ಉಳಿದ ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ  ನಿಭಾಯಿಸಿದ್ದಾರೆ. ಚಿತ್ರದಲ್ಲಿ   ಸಂಗೀತ ನಿರ್ದೇಶಕ ಆನಂದರಾಜಾ ವಿಕ್ರಮ್ ಅವರು ಹಾಡುಗಳನ್ನು ಉತ್ತಮವಾಗಿ  ಕಟ್ಟಿಕೊಟ್ಟಿದ್ದಾರೆ. ೫ ಜನರ ಜೀವನದ ಹಾದಿಯನ್ನು  ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿರುವ ನಿರ್ದೇಶಕರು  ಸ್ಕ್ರೀನ್ ಪ್ಲೇ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಅದೇರೀತಿ ನಿರ್ದೇಶನದಲ್ಲಿ ಇನ್ನಷ್ಟು ಹಿಡಿತ ಸಾಧಿಸಬೇಕಿತ್ತು.  ಐದು ಜನರ ಜೀವನದ ಕುರಿತಂತೆ  ಕಥೆ  ಹೇಳಿಕೊಂಡು ಹೋಗುತ್ತಾ  ಯಾರೂ ಊಹಿಸದ ರೀತಿಯಲ್ಲಿ  ಚಿತ್ರದ ಕ್ಲೈಮ್ಯಾಕ್ಸ್  ಇಟ್ಟಿದ್ದಾರೆ. ಹಣದ ಹಿನ್ನೆಲೆಯಲ್ಲಿ ನಡೆಯುವ ಈ  ಕಥೆಯಲ್ಲಿ  ರುಪಾಯಿಯ  ಬೆಲೆಯ ಜೊತೆಗೆ ನಿರ್ದೇಶಕರು ಸಂಬಂಧಗಳು, ಭಾವನೆಗಳು, ಬದುಕಿನ ಮೌಲ್ಯಗಳ ಬಗ್ಗೆಯೂ  ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಉತ್ತಮವಾಗಿದೆ.  ನಿರ್ದೇಶಕರು ಆಯ್ಕೆ  ಮಾಡಿಕೊಂಡಿರುವ  ಕಂಟೆಂಟ್ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ, ಆ ಕಾರಣಕ್ಕೆ ಅವರ  ಈ ಪ್ರಯತ್ನ ಮೆಚ್ಚುವಂಥಾದ್ದು.
 
ಮದ್ಯಮ ವರ್ಗದ ಯುವಕರಿಗೆ ಹಣದ ಅವಶ್ಯಕತೆ ಎಷ್ಟಿರುತ್ತದೆ,  ಅದನ್ನು ಪಡೆದುಕೊಳ್ಳಲು ಎಷ್ಟೆಲ್ಲ  ಕಷ್ಟಪಡುತ್ತಾರೆ, ಕೊನೆಗೆ ಅದು ಯಾರ ಪಾಲಾಗುತ್ತದೆ, ಜೀವನದಲ್ಲಿ ಯಾವುದು ಮುಖ್ಯ ಎಂದು ರುಪಾಯಿ ಚಿತ್ರದ ಮೂಲಕ ಹೇಳಲಾಗಿದೆ. ಈ ಚಿತ್ರವನ್ನು ಮಂಜುನಾಥ್ ಎಂ. ಹಾಗೂ ಹರೀಶ್ ಸೇರಿ ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರುಪಾಯಿ ಕಲಿಸಿದ ಜೀವನ ಪಾಠ - Chitratara.com
Copyright 2009 chitratara.com Reproduction is forbidden unless authorized. All rights reserved.